ನೀರ್ಗಲ್ಲ ಬಿರುಕು -
ಹಿಮನದಿಯ (ಗ್ಲೇಶಿಯರ್) ಜಾಡಿನಲ್ಲಿ ತಲೆದೋರುವ ಕಮರಿ (ಕ್ರಿವ್ಯಾಸ್). ಧ್ರುವಪ್ರದೇಶಗಳಲ್ಲಿಯೂ ಅತ್ಯುನ್ನತ ಪರ್ವತಗಳಲ್ಲಿಯೂ ಹಿಮ ಅಧಿಕವಾಗಿ ತುಂಬುತ್ತಲೂ ಆಗಾಗ್ಗೆ ಕರಗುತ್ತಲೂ ಗಡ್ಡೆ ಕಟ್ಟುತ್ತಲೂ ಇರುವುದು ಸರಿಯಷ್ಟೆ. ಆ ಹಿಮ ಅಲ್ಲಿ ಹಳ್ಳಗಳನ್ನು ಕೊರೆಯುವುದು. ಇಂಥ ಹಳ್ಳಗಳು ಹಿಮದಿಂದ ತುಂಬಿಕೊಂಡಾಗ ಆ ಹಿಮರಾಶಿ ಚಿಕ್ಕ ಹಿಮನದಿಯಾಗಿ ಕೆಳಕಣಿವೆಗೆ ಪ್ರಸರಿಸುವುದು. ಅದು ಬೆಟ್ಟದ ಇಳಿಜಾರಿನಲ್ಲಿ ತನ್ನ ಗುರುತ್ವದಿಂದಲೇ ಪ್ರವಹಿಸುತ್ತದೆ. ಮಂದಗತಿಯಲ್ಲಿ ಮುಂದೆಸಾಗುವ ಹಿಮನದಿ ತನ್ನ ಕೊರೆತದಿಂದ ಸಂಗ್ರಹವಾದ ಕಲ್ಲುಬಂಡೆಗಳು, ಮರಳು ಮೊದಲಾದ ಹೊರೆಯನ್ನು ಹೊತ್ತುಕೊಂಡು ಹರಿಯುತ್ತದೆ. ಇದರ ಹೆಚ್ಚಿನ ಭಾಗ ಹಿಮನದಿಯ ಮೇಲ್ಭಾಗ ಮತ್ತು ಮುಂಭಾಗದಲ್ಲಿ ಇರುವುದು. ಹಿಮನದಿ ವಿಸ್ತಾರವಾಗುತ್ತ ಹೋಗುವಾಗ ತಳಶಿಲೆಯ ತಡೆಯಿಂದ ಅದರ ನಡುವೆ 30 ಮೀಟರುಗಳಿಗೂ ಹೆಚ್ಚಿನ ಆಳದ ಬಿರುಕುಗಳು ತೋರಿಬರುತ್ತವೆ. ಇವೇ ನೀರ್ಗಲ್ಲ ಬಿರುಕುಗಳು. ಇವು ಹಿಮನದಿಯಲ್ಲಿ ಅಡ್ಡವಾಗಿಯೂ ನೀಟವಾಗಿಯೂ ಗೋಚರಿಸಬಹುದು. ಹಿಮಸಂಚಾರಿಗಳಿಗೂ ಪರ್ವತಾರೋಹಿಗಳಿಗೂ ನೀರ್ಗಲ್ಲ ಬಿರುಕು ಮೃತ್ಯುಪಂಜರವಾಗಿ ಪರಿಣಮಿಸುವುದುಂಟು. ಅದರೊಳಗೆ ಸಿಲುಕಿದವರ ಶವಗಳು ಅತಿದೀರ್ಘಕಾಲದ ಮೇಲೆ ಹೊರಕಾಣಿಸುವುದು ಸಂಭಾವ್ಯ. ಉದಾಹರಣೆಗೆ 1820ರಲ್ಲಿ ಗ್ರೀನ್ಲೆಂಡಿನ ಡೆಸ್ ಬಾಸನ್ ಎಂಬ ಹಿಮನದಿಯ ಬಿರುಕಿನಲ್ಲಿ ಸಿಕ್ಕಿಬಿದ್ದ ಮೂವರು ಮಾರ್ಗದರ್ಶಕರ ಶವಗಳೂ 1861, 1863, ಮತ್ತು 1865ರಲ್ಲಿ ಹೊರಕಾಣಿಸಿಕೊಂಡವು. ಅಷ್ಟರಲ್ಲಿಯೇ ಆ ಹಿಮನದಿ 6 ಕಿಲೊಮೀಟರುಗಳಷ್ಟು ದೂರ ಸರಿದಿತ್ತು. ಆಸ್ಟ್ರಿಯದ ಆಲ್ಪ್ಸ್ಸ್‍ನ ನೀರ್ಗಲ್ಲ ಬಿರುಕೊಂದರಲ್ಲಿ ಶತಮಾನಗಳ ಹಿಂದಿನ ರೀತಿಯ ಉಡುಪುಗಳನ್ನು ಧರಿಸಿದ್ದ ಒಂದು ಶವ 1860ರಲ್ಲಿ ದೊರೆತಿತ್ತು. ಈ ನೀರ್ಗಲ್ಲ ಬಿರುಕುಗಳ ಮೇಲೆ ಹಿಮದ ಕಣಗಳು ಮುಚ್ಚಿಕೊಂಡು ಅವು ಫಕ್ಕನೆ ದೃಗ್ಗೋಚರವಾಗದಿರುವುದೇ ಇಂಥ ಅಪಘಾತಗಳಿಗೆ ಕಾರಣ.
(ಎಂ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ